ಕುಂದಾಪುರ ತಾಲೂಕಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರವು ನೂರಾರು ವರ್ಷಗಳಿಂದ ಬಂಟ ಸಮುದಾಯದ ನೆಲೆಬೀಡಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿ ಎನ್ನಿಸದು. ಈ ಪರಿಸರದಲ್ಲಿ ಬಂಟರು ಸಾಮಾಜಿಕವಾಗಿ ಮತ್ತು ಸಂಖ್ಯೆಯ ದೃಷ್ಟಿಯಿಂದ ಒಂದು ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಮೂಲೆ ಮೂಲೆಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಬಂಟರು ತಮ್ಮ ಸಂಪ್ರದಾಯ ಹಾಗೂ ತಾವು ನೆಲೆಸಿರುವ ಪರಿಸರದ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿಗಳಿಗೆ ಅನುಸಾರವಾಗಿ ನೆಲೆ ಕಂಡುಕೊಂಡಿದ್ದಾರೆ.
ಹಾಗೆಯೇ ಇಲ್ಲಿನ ಬಂಟರು ತಾವು ವಾಸಿಸುತ್ತಿರುವ ಪರಿಸರದ ಇತರ ಸಮುದಾಯಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದು ಸ್ಥಳೀಯ ಭೂಗಣೆ, ಗುತ್ತು, ಬೀಡುಗಳ ಮಟ್ಟದಲ್ಲಿ ಹಿರಿಯರಾಗಿ ಗುರುತಿಸಿಕೊಂಡಿದ್ದಾರೆ. ಇಂದಿಗೂ ಸಹ ತಾಲೂಕಿನ ವಿವಿಧೆಡೆಗಳಲ್ಲಿ ಪಾರಂಪರಿಕವಾದ ಮತ್ತು ಪ್ರತಿಷ್ಠಿತ ಬಂಟರ ಮನೆ, ಮನೆತನಗಳಿವೆ.