ಕುಂದಾಪುರ ತಾಲೂಕು ಯುವ ಬಂಟರ ಸಂಘ, ಕುಂದಾಪುರ

ಈ ಜಗತ್ತಿನಲ್ಲಿ ನಾಗರೀಕತೆ ಕಾಲಿಟ್ಟ ದಿನಗಳಿಂದಲೂ ಮಾನವ ಸಂಘಜೀವಿಯಾಗಿ ಬದುಕುತ್ತಿದ್ದಾನೆ. ಈ ಬಗೆಯ ಸಂಘಜೀವನ ಕಾಲಕಳೆದಂತೆ ಸಹಬಾಳ್ವೆಯ ತತ್ವಕ್ಕೆ ನಾಂದಿಯಾಯಿತು. ಆದರೆ ಆಧುನಿಕತೆ ಉತ್ಪಾದಿಸಿದ ಅತಿಯಾದ ಒತ್ತಡಗಳ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಸಂಘಜೀವನ ಮರೆಯಾಗುತ್ತಿದೆ. ವಿದ್ಯುನ್ಮಾನ ಜಗತ್ತಿನ ಒಡನಾಟದ ಪರಿಣಾಮವಾಗಿ ಭಾವನಾತ್ಮಕ ಸಂಬಂಧಗಳು ಹಂತ ಹಂತವಾಗಿ ಕುಸಿಯುತ್ತಿವೆ. ಇಂದಿನ ಯುವತಲೆಮಾರು ಬಹುತೇಕವಾಗಿ ಏಕಾಂಗಿತನವನ್ನು ಬಯಸುತ್ತಿದೆ. ಅವರಿಗೆ ಯಂತ್ರಗಳೊಂದಿಗಿನ ಬದುಕು ಹೆಚ್ಚು ಪ್ರಿಯ ಮತ್ತು ಹಿತ ಅನ್ನಿಸಿದೆ. ಮಾನವೀಯ ಮತ್ತು ಸಾಮಾಜಿಕ ಸಂಬಂಧಗಳನ್ನು ಬಲಗೊಳಿಸುವ ಹಿನ್ನೆಲೆಯಲ್ಲಿ ಇದು ಅತ್ಯಂತ ಪರಿಣಾಮಕಾರಿಯಾದ ಬೆಳವಣಿಗೆಯಲ್ಲ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪಾರಂಪರಿಕವಾಗಿ ಬೆಳೆದುಬಂದಿರುವ ಸಾಂಘಿಕ ತತ್ವವನ್ನು ಮಗದೊಮ್ಮೆ ಜಾಗೃತಗೊಳಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸರಕಾರೇತರ ಮತ್ತು ಸ್ವಯಂ ಸೇವಾ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿಶಿಷ್ಟವಾಗಿ ಕಾರ್ಯೋನ್ಮುಖವಾಗಿವೆ.

ಯಾವುದೇ ಸಂಘಟನೆಗಳನ್ನು ಹುಟ್ಟುಹಾಕುವುದು ಮುಖ್ಯವಲ್ಲ. ಅದನ್ನು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಸಿ, ಪೋಷಿಸುವುದು ಅತ್ಯಂತ ಮಹತ್ವಪೂರ್ಣವಾದುದು. ಒಂದು ಸಂಘಟನೆಯೊಳಗಿನ ಎಲ್ಲಾ ಸದಸ್ಯರುಗಳು ಒಗ್ಗೂಡಿ ಶ್ರಮಿಸಿ ತಮ್ಮ ಒಂದಿಷ್ಟು ಅಮೂಲ್ಯ ಸಮಯವನ್ನು ಅದಕ್ಕಾಗಿ ವಿನಿಯೋಗಿಸಿದಾಗ ಮಾತ್ರ ಅದು ಯಶಸ್ಸಿನ ಪಥದಲ್ಲಿ ಸಾಗಬಲ್ಲದು. ಸಂಘಟನೆಯೊಂದು ಸಂಕಷ್ಟದ ಸ್ಥಿತಿಯಲ್ಲಿದ್ದಾಗಲೂ, ಅದಕ್ಕೆ ಕಾರಣವಾದ ಸಂಗತಿಗಳನ್ನು ಅರ್ಥೈಸಿಕೊಂಡು ಪುನರ್ರಚಿಸುವ ಕಾಯಕದಲ್ಲಿ ಎಲ್ಲರೂ ಒಗ್ಗೂಡಿ ಯತ್ನಿಸಿದಾಗ ಆ ಸಂಘಟನೆ ಎಂತಹ ಮಹತ್ವದ ಸವಾಲುಗಳಿಗೂ ಮುಖಾಮುಖಿಯಾಗಬಲ್ಲದು. ಸಂಘಟನೆಗಳು ಮುಖ್ಯವಾಗಿ ಇಂದಿನ ಎಳೆಯ ತಲೆಮಾರಿಗೆ ಸಾಮಾಜಿಕ ಸಂಸ್ಕಾರಗಳ ಕುರಿತು ಅರಿವು ಮೂಡಿಸುವುದರೊಂದಿಗೆ ನಿಜವಾದ ಭರವಸೆಯನ್ನು ವೃದ್ಧಿಸುತ್ತದೆ. ಹಾಗೆಯೆ ವಿಭಿನ್ನ ಮನಸ್ಥಿತಿಗಳ ನಡುವಿನ ಅಭಿಪ್ರಾಯಬೇಧಗಳನ್ನು ಸಂವಾದದ ಮೂಲಕ ನಿವಾರಿಸಿ, ಸಮನ್ವಯವನ್ನು ಸಾಧಿಸುತ್ತದೆ. ಹೀಗೆ ಸಹಬಾಳ್ವೆಯ ತತ್ವದಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳ ಸಾಲಿನಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಅನನ್ಯ ಸ್ಥಾನವಿದೆ.
ಕುಂದಾಪುರ ತಾಲೂಕು ಚಾರಿತ್ರಿಕವಾಗಿ ಬಂಟ ಸಮುದಾಯದ ಎಲ್ಲಾ ವರ್ಗಗಳ ಆವಾಸದ ನೆಲೆ ಎನ್ನಬಹುದು. ಇಲ್ಲಿನ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗಗಳ ಉನ್ನತಿಗೆ ಬಂಟರ ಕೊಡುಗೆ ಅನನ್ಯ ಮತ್ತು ವಿಶಿಷ್ಟವಾದುದು. ಈ ಸಮುದಾಯದ ಪ್ರತಿನಿಧಿಗಳು ನಿರಂತರವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದಿದ್ದಾರೆ. ಮುಖ್ಯವಾಗಿ ಕೃಷಿ ಮತ್ತು ಉದ್ಯಮ ರಂಗದಲ್ಲಿ ಬಂಟರ ಪ್ರಾತಿನಿಧ್ಯ ಮಹತ್ವಪೂರ್ಣವಾದುದು. ಇಂತಹ ಉನ್ನತ ಸ್ಥಿತಿಗತಿಯ ನಡುವೆಯೂ ಕುಂದಾಪುರ ತಾಲೂಕಿನ ಉದ್ದಗಲಕ್ಕೂ ಲಕ್ಷಾಂತರ ಮಂದಿ ಬಂಟರು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂಬುದು ವಿಷಾದನೀಯ ಸಂಗತಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಕಂಡಿರುವ ಅಸಂಖ್ಯಾತ ಬಂಟರು ಹಲವು ವಿಧದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಬದುಕುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿನ ಬಂಟ ಕುಟುಂಬಗಳಿಗೆ ಅನ್ನ, ಅಕ್ಷರ, ಆರೋಗ್ಯ, ಆಸರೆ, ಉದ್ಯೋಗ ಸಂಬಂಧಿ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲ್ಲಿನ ಬಂಟ ಸಂಘಟನೆಗಳು ವಿಶೇಷವಾಗಿ ಶ್ರಮಿಸಿವೆ. ಇದರ ಮುಂದುವರಿದ ಭಾಗವಾಗಿ ಸಾಮಾಜಿಕ ಉಪಯುಕ್ತ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ.

ಸಂಘದ ಗುರಿ-ದಾರಿ:

ಕುಂದಾಪುರ ತಾಲೂಕಿನಲ್ಲಿ ಬಂಟ ಸಮುದಾಯದ ಚಟುವಟಿಕೆಗಳು ಮತ್ತು ಕ್ರಿಯಾಚರಣೆಯನ್ನು ವಿಸ್ತರಿಸುವ ಮತ್ತು ಸಮುದಾಯ ಬಾಂಧವರಿಗೆ ಅನುಕೂಲವಾಗುವಂತೆ ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘವನ್ನು ಸ್ಥಾಪಿಸಲಾಗಿದೆ. ತಾಲೂಕಿನ ಬಂಟ ಸಮುದಾಯದ ಯುವಶಕ್ತಿಯನ್ನು ಇನ್ನಷ್ಟು ಸದೃಢಗೊಳಿಸುವ ಮತ್ತು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸಂಘವು ಕಾರ್ಯನಿರ್ವಹಿಸುತ್ತದೆ. ಸಂಘವು ಬಂಟ ಸಮುದಾಯದ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಮಹತ್ವದ ಕಳಕಳಿಯೊಂದಿಗೆ ಅವಕಾಶಗಳಿಂದ ವಂಚಿತರಾದ ಮತ್ತು ಸಮುದಾಯದ ಹಿಂದುಳಿದ ಜನರನ್ನು ಪ್ರಧಾನವಾಹಿನಿಗೆ ತರಲು ಕ್ರಿಯಾಯೋಜನೆ ರೂಪಿಸಿ, ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ಕುಂದಾಪುರ ತಾಲೂಕಿನ ಬಂಟ ಸಮಾಜ ಎದುರಿಸುತ್ತಿರುವ ಬಹುಮುಖಿ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಪರಿಹಾರ ಮಾರ್ಗೋಪಾಯಗಳನ್ನು ರೂಪಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಯುವ ಜನಾಂಗದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಂಘದ ಚಟುವಟಿಕೆಗಳು ಆಕೃತಿಗೊಂಡಿವೆ. ವೈಯಕ್ತಿಕ ನೆಲೆಯಿಂದ ಸಂಘಟನೆಯ ನೆಲೆಗೆ’ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಸಂಘದ ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳು ಕ್ರೋಢೀಕರಣಗೊಂಡಿವೆ.

ಸದಸ್ಯತನ ಅಭಿಯಾನ:

ಸಂಘದ ವತಿಯಿಂದ ಸಾಮುದಾಯಿಕ ಉಪಯುಕ್ತ ಮತ್ತು ಪರಿಣಾಮಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮತ್ತು ನಿರ್ವಹಿಸುವ ಉದ್ದೇಶದ ಹಿನ್ನೆಲೆಯಲ್ಲಿ ನಿಧಿಯ ಅಗತ್ಯವನ್ನು ಮನಗಂಡು ಸದಸ್ಯತನ ಅಭಿಯಾನವನ್ನು ಹಂತ ಹಂತವಾಗಿ ತೀವೃಗೊಳಿಸಲಾಗಿದೆ. ಕರ್ನಾಟಕ ರಾಜ್ಯದ ಒಳಗೆ ಮತ್ತು ಹೊರಗೆ ನೆಲೆಸಿರುವ ಕುಂದಾಪುರ ಮೂಲದ ಬಂಟ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಸಾವಿರಕ್ಕೂ ಹೆಚ್ಚು ಮಂದಿ ಸಂಘ ಸ್ಥಾಪನೆಗೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸದಸ್ಯತನವನ್ನು ಹೊಂದಿರುವುದು ದಾಖಲೆಯ ಸಂಗತಿಯಾಗಿದೆ. ಇವರಲ್ಲಿ ಸಂಘದ ಆಜೀವ ಸದಸ್ಯರೊಂದಿಗೆ ಅನೇಕ ಮಂದಿ ಪೋಷಕ, ಮಹಾಪೋಷಕ ಮತ್ತು ಗೌರವ ಮಹಾಪೋಷಕ ಸದಸ್ಯತನವನ್ನು ಹೊಂದಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸದಸ್ಯತನ ಅಭಿಯಾನವನ್ನು ತೀವೃಗೊಳಿಸಿ. ಸಮುದಾಯದ ದೊಡ್ಡ ಸಂಖ್ಯೆಯ ಜನರನ್ನು ಸಂಘದ ಚಟುವಟಿಕೆಗಳೊಂದಿಗೆ ಬೆರೆಯುವ ತೆರೆದ ಅವಕಾಶಗಳನ್ನು ಕಲ್ಪಿಸಲಾಗಿದೆ.

ದತ್ತಿನಿಧಿ:

ಸಮುದಾಯದೊಳಗಿನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿ ಯಾ ಕುಟುಂಬಗಳಿಗೆ, ಅವರ ಸಮಸ್ಯೆಯ ಸ್ವರೂಪ ಮತ್ತು ವಾಸ್ತವಾಂಶವನ್ನು ಅರ್ಥೈಸಿಕೊಂಡು ಸಹಾಯಹಸ್ತ ಚಾಚುವ ಉದ್ದೇಶದ ಹಿನ್ನೆಲೆಯಲ್ಲಿ ಸಂಘವು ತನ್ನ ಸ್ಥಾಪನೆಯ ದಿನಗಳಿಂದಲೇ ವಿಭಿನ್ನ ಮಾದರಿಯ ದತ್ತಿನಿಧಿ ಯೋಜನೆಗಳನ್ನು ಆರಂಭಿಸಿ, ದೊಡ್ಡ ಮೊತ್ತದ ನಿಧಿಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿವೇತನ, ಆರೋಗ್ಯ ಭಾಗ್ಯ ಮತ್ತು ಮಾಂಗಲ್ಯ ಸೂತ್ರ ದತ್ತಿನಿಧಿಗಳನ್ನು ಸಂಘವು ಹೊಂದಿದ್ದು ಈಗಾಗಲೇ ಅನೇಕ ಮಂದಿ ದಾನಿಗಳು ತಮ್ಮ ಸಾಮಾಜಿಕ ಕಳಕಳಿಯ ಭಾಗವಾಗಿ ಉದಾರ ಆರ್ಥಿಕ ನೆರವು ನೀಡಿದ್ದಾರೆ. ಈವರೆಗೆ ದೇಣಿಗೆ ರೂಪದಲ್ಲಿ ಸಂಗ್ರಹವಾದ ದತ್ತಿನಿಧಿಯ ಒಟ್ಟು ಮೊತ್ತ ರೂ. ೧೦ ಲಕ್ಷವನ್ನು ದಾಟಿದೆ. ಸಮುದಾಯದ ಹಿರಿಯರ ಮಾರ್ಗದರ್ಶನ ಪಡೆದು ಈ ದತ್ತಿನಿಧಿ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ದಾನಿಗಳ ಅನ್ವೇಷಣೆ ನಡೆಸಲು ಕ್ರಿಯಾಯೋಜನೆ ರೂಪಿಸಲಾಗಿದೆ.

ಯುವ ಬಂಟ ಸಾಧಕರ ದಾಖಲೀಕರಣ:

ಯುವ ಬಂಟ ಸಾಧಕರ ದಾಖಲೀಕರಣ ಮತ್ತು ಪ್ರಕಟಣೆ ಯೋಜನೆಯು ಸಂಘದ ಮಹತ್ವಾಕಾಂಕ್ಷೆಯ ಪ್ರಯೋಗವಾಗಿದೆ. ಕುಂದಾಪುರ ತಾಲೂಕಿನ ನಿವಾಸಿಗಳಾಗಿರುವ ಬಂಟ ಸಮುದಾಯದ ಯುವಕ-ಯುವತಿಯರ ವಿಶಿಷ್ಟ ಪ್ರತಿಭೆ, ಸಾಮರ್ಥ್ಯ ಹಾಗೂ ಸಾಧನೆಗಳು ಸಮಾಜದ ಪ್ರಧಾನ ವಾಹಿನಿಯಲ್ಲಿ ಪ್ರಸರಣಗೊಳ್ಳಬೇಕು ಹಾಗೂ ಹೊಸ ತಲೆಮಾರಿಗೆ ಮಾದರಿಯಾಗಬೇಕು ಎಂಬ ಸಾಮುದಾಯಿಕ ಕಳಕಳಿಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಸಾಹಿತ್ಯ, ಕ್ರೀಡೆ, ಉದ್ಯಮ, ಸಂಘಟನೆ, ವೈದ್ಯಕೀಯ, ತಾಂತ್ರಿಕ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸೇವೆ, ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಹಾಗೂ ಇನ್ನಿತರ ಕಲಾ ಪ್ರಕಾರಗಳಲ್ಲಿ ಅಥವಾ ಯಾವುದೇ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಅಥವಾ ಬಹುಮಾನ ಪಡೆದ ಯುವಕ-ಯುವತಿಯರ ವಿವರಗಳನ್ನು ದಾಖಲಿಸಿ, ಗ್ರಂಥರೂಪದಲ್ಲಿ ಪ್ರಕಟಿಸುವ ಯೋಜನೆ ಇದು.