ಕುಂದಾಪುರ ತಾಲೂಕಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರವು ನೂರಾರು ವರ್ಷಗಳಿಂದ ಬಂಟ ಸಮುದಾಯದ ನೆಲೆಬೀಡಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿ ಎನ್ನಿಸದು. ಈ ಪರಿಸರದಲ್ಲಿ ಬಂಟರು ಸಾಮಾಜಿಕವಾಗಿ ಮತ್ತು ಸಂಖ್ಯೆಯ ದೃಷ್ಟಿಯಿಂದ ಒಂದು ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಮೂಲೆ ಮೂಲೆಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಬಂಟರು ತಮ್ಮ ಸಂಪ್ರದಾಯ ಹಾಗೂ ತಾವು ನೆಲೆಸಿರುವ ಪರಿಸರದ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿಗಳಿಗೆ ಅನುಸಾರವಾಗಿ ನೆಲೆ ಕಂಡುಕೊಂಡಿದ್ದಾರೆ. ಹಾಗೆಯೇ ಇಲ್ಲಿನ ಬಂಟರು ತಾವು ವಾಸಿಸುತ್ತಿರುವ ಪರಿಸರದ ಇತರ ಸಮುದಾಯಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದು ಸ್ಥಳೀಯ ಭೂಗಣೆ, ಗುತ್ತು, ಬೀಡುಗಳ ಮಟ್ಟದಲ್ಲಿ ಹಿರಿಯರಾಗಿ ಗುರುತಿಸಿಕೊಂಡಿದ್ದಾರೆ. ಇಂದಿಗೂ ಸಹ ತಾಲೂಕಿನ ವಿವಿಧೆಡೆಗಳಲ್ಲಿ ಪಾರಂಪರಿಕವಾದ ಮತ್ತು ಪ್ರತಿಷ್ಠಿತ ಬಂಟರ ಮನೆ, ಮನೆತನಗಳಿವೆ.
ಈ ಎಲ್ಲಾ ಬಗೆಯ ವೈಭವ-ಹಿರಿತನ-ಪ್ರತಿಷ್ಠೆಗಳ ನಡುವೆಯೂ ಇಲ್ಲಿನ ಬಂಟ ಸಮುದಾಯದೊಳಗೆ ಒಂದು ರೀತಿಯ ವರ್ಗ ಸಂಘರ್ಷ ಇದ್ದೇ ಇದೆ. ಇದು ಇಡೀ ಸಮುದಾಯಕ್ಕೆ ಮುಜುಗರ ಮತ್ತು ಆತಂಕಗಳನ್ನು ಹುಟ್ಟಿಸುವ ಸಂಗತಿಯೂ ಹೌದು. ಇತರ ಪ್ರಬಲ ಸಮುದಾಯಗಳಲ್ಲಿ ಸಹ ಇಂಥದ್ದನ್ನು ಕಾಣಬಹುದಾದರೂ ಬಂಟ ಸಮುದಾಯದೊಳಗೆ ಗುರುತಿಸಬಹುದಾದ ವರ್ಗ ಸಂಘರ್ಷದ ಸ್ವರೂಪ ತೀವೃತರವಾದುದು. ತಾಲೂಕಿನ ಗಡಿ ಭಾಗದ ಹಳ್ಳಿಗಳಿಗೆ ಹೋದರೆ ವಸ್ತುಸ್ಥಿತಿಯ ನೈಜತೆ ದಟ್ಟವಾಗಿ ಅರಿವಿಗೆ ಬರುತ್ತದೆ. ಆಧುನಿಕತೆ ವ್ಯಾಪಕ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳನ್ನು ಆವರಿಸಿಕೊಂಡಿರುವ ಇಂದಿನ ದಿನಗಳಲ್ಲಿಯೂ ಬಂಟ ಸಮುದಾಯವನ್ನು ಪ್ರತಿನಿಧಿಸುವ ದೊಡ್ಡ ಸಂಖ್ಯೆಯ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ ಎಂಬುದು ವಿಪರ್ಯಾಸವೇ ಸರಿ. ತಾಲೂಕಿನ ತೀರಾ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿದರೆ ಮನೆಯ ಆವರಣದಿಂದ ಹೊರಬರಲು ಹಿಂಜರಿಯುವ ಒಂದಿಷ್ಟು ಮಂದಿ ಯುವತಿಯರು ಕಾಣಸಿಗುತ್ತಾರೆ. ಇಂದಿಗೂ ಸಹ ವಿದ್ಯುತ್ ಮತ್ತು ಇತರ ಆಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದದ ಹಲವಾರು ಬಂಟ ಕುಟುಂಬಗಳಿವೆ. ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ನಡುವೆಯೂ ಉನ್ನತ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಬಡವರ ಮನೆಯ ಹೆಣ್ಣುಮಕ್ಕಳ ವಿವಾಹದ ನಿರ್ವಹಣೆ ತೀವೃ ಸ್ವರೂಪದ ಸವಾಲಾಗಿ ಪರಿಣಮಿಸಿದೆ. ಬಂಟರ ಹಿರಿಮೆ-ವೈಭವ-ಪರಂಪರೆಗಳ ಕುರಿತು ಸಂಭ್ರಮಪಡುವ ಈ ಸಂದರ್ಭದಲ್ಲಿ ಈ ಮೇಲೆ ಗುರುತಿಸಲಾದ ಸಂಗತಿಗಳ ಕಡೆಗೆ ಅಷ್ಟೇ ಗಂಭೀರವಾಗಿ ಯೋಚಿಸುವ, ಕ್ರಿಯಾ ಯೋಜನೆಗಳನ್ನು ರೂಪಿಸುವ ಮತ್ತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ.
ಕುಂದಾಪುರ ತಾಲೂಕಿನಲ್ಲಿ ಯುವ ಬಂಟರ ಸಂಘವನ್ನು ಹುಟ್ಟುಹಾಕಬೇಕೆಂಬ ಯೋಚನೆ ರೂಪು ತಳೆದದ್ದು ಸುಮಾರು ಆರು ವರ್ಷಗಳ ಹಿಂದೆ, ಅಂದರೆ ೨೦೦೯ರಲ್ಲಿ. ಆದರೆ ಎಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಒಂದು ಸಂಘಟನೆ ಇದ್ದಕ್ಕಿದ್ದಂತೆ ಅಥವಾ ಪುಟ್ಟ ಅವಧಿಯಲ್ಲಿ ಹುಟ್ಟಿಕೊಳ್ಳುವಂಥದ್ದಲ್ಲ. ಅದು ಬಹು ಅಭಿಪ್ರಾಯಗಳ, ಬಹು ಯೋಚನೆಗಳ ಕೂಡುವಿಕೆಯ ಫಲ. ಹೀಗೆ ಬಹುಕಾಲದ ವಿಚಾರ ವಿನಿಮಯ ಮತ್ತು ಅಭಿಪ್ರಾಯ ಸಂಗ್ರಹಗಳ ಪರಿಣಾಮವೆಂಬಂತೆ ೨೦೧೩ರ ವೇಳೆಗೆ ಕುಂದಾಪುರ ತಾಲೂಕಿನಲ್ಲಿ ಯುವ ಬಂಟರ ಸಂಘದ ಪರಿಕಲ್ಪನೆ ಸಾಕಾರಗೊಂಡಿತು. ಸಂವಾದ ಮತ್ತು ಸಹಮತದ ಮೂಲಕವೇ ಸಂಘಟನಾತ್ಮಕ ಚಟುವಟಿಕೆಗಳು ನೆಲೆಗೊಳ್ಳಬೇಕು ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ಆ ತತ್ವಕ್ಕೆ ಬದ್ದರಾಗಿ ಸಮಾನ ಮನಸ್ಕರು ಒಂದೆಡೆ ಕಲೆತು ‘ಕುಂದಾಪುರ ತಾಲೂಕು ಯುವ ಬಂಟರ ಸಂಘ’ವನ್ನು ಸ್ಥಾಪಿಸಿ, ನೊಂದಾಯಿಸಿದೆವು. ಸಂಘದ ಸ್ಥಾಪಕಾಧ್ಯಕ್ಷರಾಗಿ ಅಂಪಾರು ನಿತ್ಯಾನಂದ ಶೆಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ನಿಯಮ-ನಿಬಂಧನೆಗಳನ್ವಯ ಎರಡು ವರ್ಷಗಳ ಅವರ ಅಧಿಕಾರದ ಅವಧಿ ಪೂರ್ಣಗೊಂಡ ಬಳಿಕ, ಸುಕೇಶ್ ಶೆಟ್ಟಿ ಹೊಸಮಠ (2015 – 17) ಹಾಗೂ ಪ್ರವೀಣ್ ಶೆಟ್ಟಿ ಕೊಡ್ಲಾಡಿಯವರು (2017 – 19) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಮುಂದಿನ ಅವಧಿಯ (2019-21) ಸಾರಥ್ಯವನ್ನು ವಹಿಸಿಕೊಳ್ಳುವ ಜವಾಬ್ಧಾರಿ ನನ್ನ ಪಾಲಿಗೆ ಒದಗಿ ಬಂತು. ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ನಿರಂತರ ಪ್ರಯತ್ನದ ಫಲವಾಗಿ ಸದಸ್ಯತನ ಅಭಿಯಾನ ಬಲಗೊಂಡಿತು.
ಸಂಘದ ಚಟುವಟಿಕೆಗಳಿಗೆ ಮೂಲ ಆಧಾರವಾದ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸುವ ಕೆಲಸಗಳು ಸಂಘಟನಾತ್ಮಕ ನೆಲೆಯಲ್ಲಿಯೇ ಸಾಕಾರಗೊಂಡವು. ಇದರ ನೇರ ಪರಿಣಾಮವೆಂಬಂತೆ ಪೂರ್ವನಿರ್ಧಾರಿತವಾಗಿ ಯೋಜಿಸಿದ ಎಲ್ಲಾ ಕಾರ್ಯಗಳು ನಿಗದಿತ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡವು. ಎರಡೂ ವರ್ಷಗಳ ಅವಧಿಯಲ್ಲಿ ಸಂಘವು ಸಾಮಾಜಿಕ ಉಪಯುಕ್ತ ಚಟುವಟಿಕೆಗಳನ್ನು ಸಂಘಟಿಸುವ್ವ ಹಂತದಲ್ಲಿ ಎಂದೂ ಸಹ ಹಿಂದೆ ಸರಿದ ಉದಾಹರಣೆಗಳಿಲ್ಲ. ಅದರಲ್ಲೂ ಮುಖ್ಯವಾಗಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಕೆಲವು ಕುಟುಂಬಗಳ ಬಗೆಗೆ ಆದ್ಯತೆಯ ಮೇರೆಗೆ ಗಮನಹರಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳ ಬಗೆಗೆ ಉತ್ತಮ ಸಾರ್ವಜನಿಕ ಅಭಿಪ್ರಾಯಗಳು ಸಹ ವ್ಯಕ್ತವಾಗಿದೆ.
ನಮ್ಮ ಸಂಘದ ವಿವಿಧ ದತ್ತಿನಿಧಿಗಳಿಗೆ ದೊಡ್ಡ ಮೊತ್ತದ ಧನ ಸಹಾಯ ಮಾಡಿದ ಸರ್ವರನ್ನೂ ಈ ಸಂದರ್ಭದಲ್ಲಿ ಅತ್ಯಂತ ಗೌರವದಿಂದ ನೆನೆಯುತ್ತೇವೆ. ಹಾಗೆಯೇ ವಿದ್ಯಾರ್ಥಿ ವೇತನ, ಕ್ರೀಡೋತ್ಸವ, ರಕ್ತದಾನ ಶಿಬಿರದಂತಹ ಮಹತ್ವದ ಕಾರ್ಯಕ್ರಮಗಳಿಗೆ ಉದಾರ ನೆಲೆಯಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಸಹ ಇಲ್ಲಿ ವಿಶೇಷವಾಗಿ ಸ್ಮರಿಸುತ್ತೇವೆ. ಸಂಘದ ಸ್ಥಾಪನೆಯ ಆರಂಭದ ದಿನಗಳಿಂದ ನಮ್ಮ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕಟಣೆ ಮತ್ತು ವರದಿಗಳನ್ನು ಸಕಾಲದಲ್ಲಿ ಪ್ರಕಟಿಸಿದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಗೆಳೆಯರನ್ನು ಮತ್ತು ಆ ಸಂಸ್ಥೆಗಳನ್ನು ಅತ್ಯಂತ ಅಭಿಮಾನದಿಂದ ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ಮುಂದಿನ ದಿನಗಳಲ್ಲಿಯೂ ಅವರೆಲ್ಲರ ತುಂಬು ಸಹಕಾರವನ್ನು ಬಯಸುತ್ತೇವೆ. ನಮ್ಮ ಸಂಘದ ಬಹುಮುಖಿ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತ ಬಂದಿರುವ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಕುಂದಾಪುರ ಮತ್ತು ಕುಂದಾಪುರ ತಾಲೂಕು ಬಂಟರ ಯಾನೆ ನಾಡವರ ಸಂಘದ ಸರ್ವರಿಗೂ ಆದರಪೂರ್ವಕ ವಂದನೆಗಳು. ಸಂಘದ ಚಟುವಟಿಕೆಗಳ ಕುರಿತಂತೆ ಕಾಲದಿಂದ ಕಾಲಕ್ಕೆ ಉತ್ತಮ ಸಲಹೆ- ಸೂಚನೆಗಳನ್ನು ನೀಡಿದ ಅನೇಕ ಮಂದಿ ಸಮುದಾಯ ಬಾಂಧವರನ್ನು, ಹಿರಿಯರನ್ನು ಗೌರವದಿಂದ ಸ್ಮರಿಸಿಕೊಳ್ಳುತ್ತಿದ್ದೇನೆ.
– ಡಾ. ಅಂಪಾರು ನಿತ್ಯಾನಂದ ಶೆಟ್ಟಿ
ಅಧ್ಯಕ್ಷರು