ಸಂಘ ಶಕ್ತಿಯಲ್ಲಿ ಅತಿ ವಿಶಿಷ್ಟವಾದ ಮತ್ತು ಮಹೋನ್ನತವಾದ ಬಲವಿದೆ ಎಂಬ ತತ್ವದಲ್ಲಿ ಎತ್ತರದ ನಂಬಿಕೆಯನ್ನು ಇರಿಸಿಕೊಂಡವನು ನಾನು. ನನ್ನೊಳಗಿನ ವ್ಯಕ್ತಿಗತವಾದ ಸಾಮಥ್ರ್ಯವನ್ನು ಸಂಘ ಶಕ್ತಿಯೊಂದಿಗೆ ವಿಲೀನಗೊಳಿಸಿಕೊಳ್ಳಬೇಕು ಎಂಬ ಕನಸು ಮತ್ತು ನಿರೀಕ್ಷೆ ನನ್ನ ವಿದ್ಯಾಥರ್ಿ ದೆಸೆಯಲ್ಲಿಯೇ ಚಿಗುರೊಡೆದಿತ್ತು. ಸಂಘಟನೆಯಲ್ಲಿನ ಸಹಭಾಗಿತ್ವ ಸಾಮಾಜಿಕವಾದ ತೊಡಗಿಕೊಳ್ಳುವಿಕೆಗೆ ಪ್ರೇರಕ ಶಕ್ತಿ ಎಂಬುದು ಬಹಳ ಹಿಂದೆಯೇ ನಾನು ನನ್ನ ಗುರು-ಹಿರಿಯರಿಂದ ಕಲಿತ ಪಾಠ. ನಮ್ಮೂರಿನ, ಸುತ್ತಲಿನ ಪರಿಸರದ, ನಾನು ಕಲಿತ ಶಾಲಾ-ಕಾಲೇಜುಗಳ ಆಶ್ರಯದಲ್ಲಿ ನಡೆಯುತ್ತಿದ್ದ ಸಂಘಟನಾತ್ಮಕ ಮತ್ತು ಸಾಮಾಜಿಕ ಉಪಯುಕ್ತ ಚಟುವಟಿಕೆಗಳನ್ನು ಪ್ರೇಕ್ಷಕನ ನೆಲೆಯಲ್ಲಿ ದೂರದಿಂದ ಗಮನಿಸುತ್ತಿದ್ದೆ ಮತ್ತು ಒಂದು ಹಂತದವರೆಗೆ ತೊಡಗಿಕೊಳ್ಳುತ್ತಿದ್ದೆ. ಬಹುಶಃ ನಾನು ಭಾವಿಸಿಕೊಳ್ಳುವ ಹಾಗೆ ಈ ಮೇಲಿನ ತಿಳಿವಳಿಕೆಗಳು, ಸಂಗತಿಗಳು ನನ್ನಲ್ಲಿ ಸಂಘಟನಾ ಶಕ್ತಿಯನ್ನು ಹಂತ ಹಂತವಾಗಿ ರೂಪಿಸತೊಡಗಿದವು. ನನ್ನೊಳಗೆ ಒಬ್ಬ ‘ಸಂಘಟಕ’ನ ಹುಟುಕಾಟ ಆರಂಭವಾದದ್ದು ಈ ನೆಲೆಯಿಂದಲೇ.
ಕುಂದಾಪುರ ತಾಲೂಕಿನಲ್ಲಿ ಯುವ ಬಂಟರ ಸಂಘವನ್ನು ಹುಟ್ಟುಹಾಕಬೇಕೆಂಬ ಯೋಚನೆ ರೂಪು ತಳೆದದ್ದು ಸುಮಾರು ಆರು ವರ್ಷಗಳ ಹಿಂದೆ, ಅಂದರೆ 2009ರಲ್ಲಿ. ಆದರೆ ಎಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಒಂದು ಸಂಘಟನೆ ಇದ್ದಕ್ಕಿದ್ದಂತೆ ಅಥವಾ ಪುಟ್ಟ ಅವಧಿಯಲ್ಲಿ ಹುಟ್ಟಿಕೊಳ್ಳುವಂಥದ್ದಲ್ಲ. ಅದು ಬಹು ಅಭಿಪ್ರಾಯಗಳ, ಬಹು ಯೋಚನೆಗಳ ಕೂಡುವಿಕೆಯ ಫಲ. ಹೀಗೆ ಬಹುಕಾಲದ ವಿಚಾರ ವಿನಿಮಯ ಮತ್ತು ಅಭಿಪ್ರಾಯ ಸಂಗ್ರಹಗಳ ಪರಿಣಾಮವೆಂಬಂತೆ 2013ರ ವೇಳೆಗೆ ಕುಂದಾಪುರ ತಾಲೂಕಿನಲ್ಲಿ ಯುವ ಬಂಟರ ಸಂಘದ ಪರಿಕಲ್ಪನೆ ಸಾಕಾರಗೊಂಡಿತು. ಸಂವಾದ ಮತ್ತು ಸಹಮತದ ಮೂಲಕವೇ ಸಂಘಟನಾತ್ಮಕ ಚಟುವಟಿಕೆಗಳು ನೆಲೆಗೊಳ್ಳಬೇಕು ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ಆ ತತ್ವಕ್ಕೆ ಬದ್ದರಾಗಿ ಸಮಾನ ಮನಸ್ಕರು ಒಂದೆಡೆ ಕಲೆತು ‘ಕುಂದಾಪುರ ತಾಲೂಕು ಯುವ ಬಂಟರ ಸಂಘ’ವನ್ನು ಸ್ಥಾಪಿಸಿ ನೊಂದಾಯಿಸಿದೆವು. ಸಂಘದ ನೇತೃತ್ವವನ್ನು ವಹಿಸಿಕೊಳ್ಳುವ ಜವಾಬ್ದಾರಿಯೂ ಸಹ ನನ್ನ ಪಾಲಿಗೆ ಒದಗಿ ಬಂತು.
ಸಂಘದ ಚಟುವಟಿಕೆಗಳನ್ನು ಅಧಿಕೃತವಾಗಿ ಉದ್ಘಾಟಿಸುವ ಮೊದಲೇ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಿದೆವು. ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಅವಿರತ ಪ್ರಯತ್ನದ ಫಲವೆಂಬಂತೆ ಉದ್ಘಾಟನೆಗೂ ಪೂರ್ವದಲ್ಲಿ ಕುಂದಾಪುರ ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಒಂದು ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿತು. ಉದ್ಘಾಟನೆಗೊಂಡ ಮೊದಲ ವರ್ಷ ಸಂಘವನ್ನು ಕಟ್ಟಿ ಬೆಳೆಸುವ ಕಾರ್ಯ ಒಂದು ಮಹತ್ವದ ಸವಾಲಾಗಿ ಪರಿಣಮಿಸಿತು. ಸಂಘದ ಚಟುವಟಿಕೆಗಳಿಗೆ ಮೂಲ ಆಧಾರವಾದ ಆಥರ್ಿಕ ಸಂಪನ್ಮೂಲವನ್ನು ಕ್ರೋಢಿಕರಿಸುವ ಕೆಲಸಗಳು ಮೊದಲ ವರ್ಷದಲ್ಲಿ ಸಾಕಾರಗೊಂಡವು. ಪರಿಣಾಮವಾಗಿ ಗಮನಾರ್ಹ ಮೊತ್ತದ ದತ್ತಿನಿಧಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಎರಡನೆಯ ವರ್ಷ ಸಂಘಟನಾತ್ಮಕ ಮತ್ತು ಸಾಮಾಜಿಕ ಉಪಯುಕ್ತ ಚಟುವಟಿಕೆಗಳಿಗೆ ಆಧ್ಯತೆಯ ಮೇರೆಗೆ ಗಮನ ಹರಿಸಲಾಯಿತು. ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘವು ಮಹತ್ವಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಲ್ಲದೇ ಸಮುದಾಯ ಬಾಂಧವರಿಗೆ ಉಪಯುಕ್ತವೆನಿಸುವ ವೈವಿಧ್ಯಮಯ ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದೆ. ಈ ಎಲ್ಲಾ ಚಟುವಟಿಗಳಿಗೆ ಉತ್ತಮ ಸಾರ್ವಜನಿಕ ಅಭಿಪ್ರಾಯಗಳು ಸಹ ವ್ಯಕ್ತವಾಗಿದೆ.
ಎರಡು ವರ್ಷಗಳ ನನ್ನ ಕಾರ್ಯನಿರ್ವಹಣೆಯ ಅವಧಿ ನಾನಾ ಬಗೆಯ ಸವಾಲುಗಳಿಗೆ ಮುಖಾಮುಖಿಯಾದದ್ದು ಈ ಹಂತದಲ್ಲಿ ನನ್ನ ಅರಿವು, ಅನುಭವಕ್ಕೆ ದಕ್ಕುತ್ತಿದೆ. ಸಂಘ ಸ್ಥಾಪನೆಗೊಂಡ ಮೊದಲ ಅವಧಿಯಾಗಿದ್ದ ಹಿನ್ನೆಲೆಯಲ್ಲಿ ಸಂಘದ ಚಟುವಟಿಕೆಗಳನ್ನು ರಚನಾತ್ಮಕವಾಗಿ ಕಟ್ಟುವುದು ಒಂದು ಹಂತದ ಸಾಹಸವೆನಿಸಿತು. ಆದರೂ ಸಮುದಾಯ ಬಾಂಧವರ, ದಾನಿಗಳ, ಯುವ ಮುಖಂಡರ ಸಕಾಲಿಕ ನೆರವು ಮತ್ತು ಮಾರ್ಗದರ್ಶನದ ಪರಿಣಾಮವಾಗಿ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ವಿದ್ಯಾಥರ್ಿ ವೇತನ, ಜಿಲ್ಲಾ ಮಟ್ಟದ ಬಂಟರ ಕ್ರೀಡೋತ್ಸವ, ರಕ್ತದಾನ ಶಿಬಿರ, ವಿದ್ಯಾದೀವಿಗೆ, ಆರೋಗ್ಯಭಾಗ್ಯ, ಮಾಂಗಲ್ಯಸೂತ್ರ ಮೊದಲಾದ ಸಮುದಾಯ ಕೇಂದ್ರಿತ ಯೋಜನೆಗಳ ಮೂಲಕ ಹಿಂದುಳಿದವರಿಗೆ ಆಥರ್ಿಕ ನೆರವು ನೀಡಲು ಸಾಧ್ಯವಾಯಿತು. ಈ ಎರಡು ವರ್ಷಗಳ ಕಿರು ಅವಧಿಯಲ್ಲಿ ನನ್ನೊಂದಿಗೆ ವಿವಿಧ ಹಂತಗಳಲ್ಲಿ ಸಹಕರಿಸಿ, ಕೈಜೋಡಿಸಿದ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ನೆರವು ಮತ್ತು ಪ್ರಯತ್ನವನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಿದ್ದೇನೆ. ಸಂಘವನ್ನು ಕಟ್ಟುವ ಆರಂಭದ ದಿನಗಳಿಂದ ತೊಡಗಿ ನಿರಂತರವಾಗಿ ಮಾರ್ಗದರ್ಶನ ನೀಡುತ್ತ ಬಂದ ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರನ್ನು ಇಲ್ಲಿ ವಿಶೇಷವಾಗಿ ಸ್ಮರಿಸಿಕೊಳ್ಳಲೇಬೇಕು. ನಮ್ಮ ಸಂಘದ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತ ಬಂದಿರುವ ಬಂಟರ ಯಾನೆ ನಾಡವರ ಮಾತೃ ಸಂಘದ (ರಿ.), ಕುಂದಾಪುರ ಮತ್ತು ಕುಂದಾಪುರ ತಾಲೂಕು ಬಂಟರ ಯಾನೆ ನಾಡವರ ಸಂಘದ ಸರ್ವರಿಗೂ ಆದರಪೂರ್ವಕ ವಂದನೆಗಳು.
ಸಂಘದ ಮುಂದೆ ಇನ್ನೂ ಸಹ ಮಹತ್ವದ ಜವಾಬ್ದಾರಿಗಳಿವೆ. ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳು ಸಂಘದ ಚಟುವಟಿಕೆಗಳನ್ನು ಇನ್ನಷ್ಟು ವ್ಯಾಪಕ ನೆಲೆಯಲ್ಲಿ ಮತ್ತು ಸಮಾಜಮುಖಿಯಾಗಿ ವಿಸ್ತರಿಸುತ್ತಾರೆ ಎಂಬ ಭರವಸೆ ನಮ್ಮದು. ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮುತಿಯ ಸದಸ್ಯರನ್ನು ಅಭಿನಂದಿಸುತ್ತ ಭವಿಷ್ಯದ ಚಟುವಟಿಕೆಗಳಿಗೆ ಶುಭ ಹಾರೈಸುತ್ತೇನೆ.
-ಅಂಪಾರು ನಿತ್ಯಾನಂದ ಶೆಟ್ಟಿ
ಸ್ಥಾಪಕಾಧ್ಯಕ್ಷರು